ದಕ್ಷಿಣ ವಿಯೆಟ್ನಾಮ್ -
ಇಂಡೊ-ಚೀನ ಪರ್ಯಾಯ ದ್ವೀಪದ ಪೂರ್ವ ಪಾಶ್ರ್ವದ ದಕ್ಷಿಣ ಭಾಗದಲ್ಲಿದ್ದ ದೇಶ. ಉ.ಅ. 80 30-170 ಮತ್ತು ಪೂ.ರೇ. 1040 30-1090 30 ನಡುವಣ ಪ್ರದೇಶ.  ಹಿಂದೆ ಅಖಂಡ ವಿಯೆಟ್ನಾಮಿನ ಒಂದು ಭಾಗವಾಗಿದ್ದು 1954ರಲ್ಲಿ ಜಿನೀವ ಒಪ್ಪಂದ ಪ್ರಕಾರ ಪ್ರತ್ಯೇಕ ರಾಜಕೀಯ ಘಟಕವಾಗಿತ್ತು.  1975ರ ಏಪ್ರಿಲ್ 30ರಂದು ವಾಸ್ತವವಾಗಿಯೂ 1976ರ ಜುಲೈ 2ರಂದು ವಿಧ್ಯುಕ್ತವಾಗಿಯೂ ಉತ್ತರ ವಿಯೆಟ್ನಾಮಿನೊಂದಿಗೆ ಸೇರಿ ಅಖಂಡ ವಿಯೆಟ್ನಾಮಿನ ಅಂಗವಾಯಿತು.  ಉತ್ತರದಲ್ಲಿ ಉತ್ತರ ವಿಯೆಟ್ನಾಮ್ (ವಿಯೆಟ್ನಾಮ್ ಜನತಾ ಗಣರಾಜ್ಯ), ಪಶ್ಚಿಮದಲ್ಲಿ ಲಾವೋಸ್ ಮತ್ತು ಕಾಂಬೋಡಿಯ, ಪಶ್ಚಿಮ ದಕ್ಷಿಣಗಳಲ್ಲಿ ದಕ್ಷಿಣ ಚೀನ ಸಮುದ್ರ-ಇವು ಇದರ ಮೇರೆಗಳಾಗಿದ್ದುವು.  ವಿಸ್ತೀರ್ಣ 67,108 ಚ.ಮೈ.; ಜನಸಂಖ್ಯೆ 1,83,32,000 (1970). ರಾಜಧಾನಿಯಾಗಿದ್ದುದು ಸೈಗಾನ್ (ಈಗ ಇದರ ಹೆಸರು ಹೋ ಚೀ ಮಿನ್‍ನಗರ).

ಪಾಕೃತಿಕ ಭೂವಿವರಣೆ

ಮೇಲ್ಮೈ ಲಕ್ಷಣ :  ಉತ್ತರ-ದಕ್ಷಿಣ ಭಾಗಗಳೆರಡೂ ಸೇರಿದ ಇಡೀ ವಿಯೆಟ್ನಾಮ್ ಆಚೀಚೆ ತುದಿಗಳಲ್ಲಿ ತೂಗು ಹಾಕಿದ ಬತ್ತದ ಗೂಡೆಗಳಿರುವ ಅಡ್ಡೆಯಂತೆ ಇದೆಯೆಂದು ವರ್ಣಿಸಲಾಗಿದೆ. ಇಡೀ ವಿಯೆಟ್ನಾಮಿನ ಪಶ್ಚಿಮದ ಅಂಚಿನಲ್ಲಿ ಉತ್ತರದಿಂದ ದಕ್ಷಿಣಕ್ಕೆ ತಕ್ಕಡಿಯ ಕೋಲಿನಂತೆ ಅನ್ನಾಮೈಟ್ ಪರ್ವತ ಶ್ರೇಣಿ ಹಬ್ಬಿದೆ.  ಇದರ ಉತ್ತರದ ತುದಿಯಲ್ಲಿ ಉತ್ತರ ವಿಯೆಟ್ನಾಮಿನ ಕೆಂಪು ನದಿಯ ಮುಖಜ ಭೂಮಿಯೂ ದಕ್ಷಿಣದ ತುದಿಯಲ್ಲಿ ದಕ್ಷಿಣ ವಿಯೆಟ್ನಾಮಿನ ಮೇಕಾಂಗ್ ನದೀ ಮುಖಜ ಭೂಮಿಯೂ ಇವೆ.  ಇವೆರಡೂ ಫಲವತ್ತಾದ ಬತ್ತದ ಬಯಲುಗಳು.  ಇಲ್ಲಿ ಜನಸಾಂದ್ರತೆ ಅಧಿಕ. ಮೇಕಾಂಗ್ ನದೀ ಬಯಲು ವಾಸ್ತವವಾಗಿ ನೆರೆಯ ದೇಶವಾದ ಕಾಂಬೋಡಿಯದ ಫನಾಮ್ ಪೆನ್ ಬಳಿಯೇ ಆರಂಭವಾಗುತ್ತದೆ.  ಇದರ ಉತ್ತರಕ್ಕೆ ವೈಕೋ, ಸೈಗಾನ್ ಬಯಲಿದೆ.  ದಕ್ಷಿಣ ವಿಯೆಟ್ನಾಮಿನ ನೈಋತ್ಯ ಭಾಗವಾದ ಕೊಚಿನ್ ಚೀನ ಪ್ರದೇಶ ಬಹುತೇಕ ಮೇಕಾಂಗ್ ಬಯಲನ್ನೊಳಗೊಂಡಿದೆ.  ಇದು ಪ್ರಪಂಚದ ಅತ್ಯಂತ ಸಮೃದ್ಧ ಬತ್ತ ಬೆಳೆಯ ಪ್ರದೇಶಗಳಲ್ಲೊಂದು. ವಿಯೆಟ್ನಾಮಿನ ಮಧ್ಯಭಾಗವಾದ ಅನ್ನಾಮಿನ ನಡುವೆ ಉತ್ತರ-ದಕ್ಷಿಣ ವಿಯೆಟ್ನಾಮುಗಳನ್ನು ಪ್ರತ್ಯೇಕಿಸುವ ಗೆರೆಯಾದ 170 ಅಕ್ಷಾಂಶ ರೇಖೆ ಹಾಯ್ದುಹೋಗುತ್ತದೆ.  ಇದರ ಪೂರ್ವಭಾಗವಾದ ಕರಾವಳಿ ಪ್ರದೇಶ ಫಲವತ್ತಾದ ಬಯಲು; ಪಶ್ಚಿಮ ಭಾಗ ಪರ್ವತಮಯ. ದಕ್ಷಿಣ ಮಧ್ಯಭಾಗ ಪ್ರಸ್ಥಭೂಮಿ ಪ್ರದೇಶ.

ವಾಯುಗುಣ : ಇಲ್ಲಿಯದು ಬಹುತೇಕ ಉಷ್ಣವಲಯದ ವಾಯುಗುಣ, ಸೈಗಾನ್‍ನಲ್ಲಿ ಉಷ್ಣತೆಯ ಅಂತರ 640-920ಈ ವಾತಾವರಣದಲ್ಲಿ ಆದ್ರ್ರತೆ ಅಧಿಕವಾಗಿರುತ್ತದೆ.  ಉನ್ನತ ಪ್ರದೇಶಗಳು ಹೆಚ್ಚು ತಂಪಾಗಿರುತ್ತವೆ.  ಅಲ್ಲಿ ಚಳಿಗಾಲದ ಮಾಧ್ಯ ಉಷ್ಣತೆ 600ಈ . ಬೇಸಗೆಯದು 680 ಈ. ಮೇ-ಜೂನ್‍ನಿಂದ ಅಕ್ಟೋಬರ್-ನವೆಂಬರ್ ವರೆಗೆ ಮಳೆಗಾಲ. ವಾರ್ಷಿಕ ಮಳೆ ಉತ್ತರದ ಹುಯೇನಲ್ಲಿ 116", ಸೈಗಾನ್‍ನಲ್ಲಿ 79". ವಾರ್ಷಿಕ ಸರಾಸರಿ 78", ಕರಾವಳಿಯ ಉತ್ತರ ಭಾಗದಲ್ಲಿ ಆಗಾಗ್ಗೆ ಚಂಡಮಾರುತಗಳು ಬೀಸುವುದುಂಟು.

ಸಸ್ಯಪ್ರಾಣಿಜೀವನ :  ಇಲ್ಲಿಯ ನೈಸರ್ಗಿಕ ಸಸ್ಯ ಸಂಪತ್ತು ಉಷ್ಣವಲಯದ ನಿತ್ಯ ಹಸುರು ಕಾಡು. ಪರ್ವತಾಗ್ರ ಭಾಗಗಳು ಪೀತದಾರು ಮರಗಳ ಹೊದಿಕೆಯಿಂದ ಕೂಡಿವೆ.  ಕೊಚಿನ್ ಚೀನ ಪ್ರದೇಶದಲ್ಲಿ ನಡುನಡುವೆ ಮರ ಇರುವ ಹುಲ್ಲುಗಾವಲು (ಸವಾನ). ನೈಋತ್ಯ ಕರಾವಳಿಯಲ್ಲಿ ಗುಲ್ಮ ವೃಕ್ಷದ ಅಂಚು ಕಟ್ಟಿದಂತಿದೆ.  ಉನ್ನತ ಪ್ರದೇಶಗಳ ಪ್ರಾಣಿಗಳು ಜಿಂಕೆ, ಕಾಡೆಮ್ಮೆ, ಕಾಡೆತ್ತು, ಆನೆ, ಹುಲಿ ಮತ್ತು ಚಿರತೆ. ಸಮುದ್ರತೀರದಲ್ಲೂ ಒಳನಾಡಿನ ಜಲಪ್ರದೇಶಗಳಲ್ಲೂ ಮೀನುಗಳು ಹೇರಳವಾಗಿವೆ.

ಜನ, ಜೀವನ

ಜನಾಂಗಗಳು : ದಕ್ಷಿಣ ವಿಯೆಟ್ನಾಮಿನಲ್ಲಿ ವಿಯೆಟ್ನಾಮಿಯರೇ ಅಧಿಕ ಸಂಖ್ಯೆಯಲ್ಲಿದ್ದಾರೆ.  ಹಿಂದೆ ಇವರಿಗೆ ಅನ್ನಾಮೀಯರೆಂದು ಹೆಸರಿತ್ತು.  ಇವರಿಗೂ ಚೀನೀ ಬುಡಕಟ್ಟಿಗೂ ಸಂಬಂಧವುಂಟು.  ಅಲ್ಪಸಂಖ್ಯಾತರಲ್ಲಿ ಅತ್ಯಂತ ದೊಡ್ಡ ಗುಂಪು ಚೀನೀ ವಂಶಜರಾದ ವಿಯೆಟ್ನಾಮೀಯರದು.  ಕಾಂಬೋಡಿಯನ್ ಮೂಲದವರೂ ಚಾಮ್‍ಗಳೂ ಇದ್ದಾರೆ.  ಆದಿವಾಸಿಗಳ ಸುಮಾರು 100 ಗುಂಪುಗಳುಂಟು.  ಇವರು ಮಧ್ಯ ವಿಯೆಟ್ನಾಮಿನ ಪ್ರಸ್ಥಭೂಮಿಯಲ್ಲಿದ್ದಾರೆ.  ಭಾರತ, ಪಾಕಿಸ್ಥಾನಗಳವರೂ ಮಲೆಯನರೂ ಅರಬರೂ ಉಂಟು.  ಫ್ರೆಂಚರೂ ಇದ್ದಾರೆ.  ಅವರಲ್ಲಿ ಬಹುಮಂದಿ ಯೂರೇಷಿಯನರು.

ಭಾಷೆ : ಇಲ್ಲಿಯ ಜನರ ಭಾಷೆ ವಿಯೆಟ್ನಾಮೀ. ಕಾಂಬೋಡಿಯನ್, ಥೈ ಮತ್ತು ಚೀನೀ ಭಾಷೆಗಳನ್ನು ಇದು ಹೋಲುತ್ತದೆ.  ಸೇ. 30ರಷ್ಟು ಶಬ್ದಗಳು ಚೀನೀ ಭಾಷೆಯಿಂದ ಬಂದಿವೆ.  ವಿಯೆಟ್ನಾಮೀ ಭಾಷೆಗೆ ಚೀನೀ ಲಿಪಿಯನ್ನೇ ಬಳಸಲಾಗುತ್ತಿತ್ತು.  ಆದರೆ ರಾಷ್ಟ್ರಭಾಷೆಗೆ 18ನೆಯ ಶತಮಾನದಿಂದಲೇ ರೋಮನ್ ಲಿಪಿಯನ್ನು ಬಳಸಲಾಗುತ್ತಿದೆ.  ಇಲ್ಲಿ ವಾಸಿಸುವ ಚೀನೀಯರು ತಮ್ಮ ನುಡಿಗಳನ್ನೇ ಆಡುತ್ತಾರೆ.  ಅವು ಲಾವೋ, ಮತ್ತು ಥೈ ಭಾಷೆಗಳಿಗೆ ಹತ್ತಿರವಾಗಿವೆ.  ಅನೇಕ ಅಧಿಕಾರಿಗಳಿಗೆ ಫ್ರೆಂಚ್ ಭಾಷೆ ಬರುತ್ತದೆ.  ಇಂಗ್ಲಿಷೂ ತಕ್ಕಮಟ್ಟಿಗೆ ಪ್ರಚಾರದಲ್ಲಿದೆ.

ಧವ್ರ್ಮ :  ವಿಯೆಟ್ನಾಮೀಯರ ಧಾರ್ಮಿಕ ಆಚಾರಗಳು ಚೀನೀಯರಿಂದ ಬಂದವು.  ಮಹಾಯಾನ ಬೌದ್ಧಮತ, ತಾವೊ ಧರ್ಮ, ಕಾನ್‍ಫ್ಯೂಷನಿಸಮ್, ಪಿತೃ ಆರಾಧನೆ- ಇವೆಲ್ಲವುಗಳ ಅಂಶಗಳೂ ಇವೆ.  ವಿಯಟ್ನಾಮೀಯರು ಸಾಮಾನ್ಯವಾಗಿ ಯಾವುದೇ ಒಂದು ಧರ್ಮಕ್ಕೆ ಅಂಟಿಕೊಂಡವರಲ್ಲ.  ಸರ್ವಚೇತನವಾದದ ನಂಬಿಕೆಗಳೂ ಪ್ರಚಾರದಲ್ಲಿವೆ.  ರೋಮನ್ ಕ್ಯಾತೋಲಿಕರೂ ಇದ್ದಾರೆ.  ಹೋ ಹಾವ್ ಮತ್ತು ಕಾವೊ-ದಾಯ್ ಎಂಬ ಮತೀಯ ಪಂಗಡಗಳ ಜನರು ಮೇಕಾಂಗ್ ಬಯಲಿನಲ್ಲೂ ಟೇ ನಿನ್ ಪ್ರಾಂತ್ಯದಲ್ಲೂ ಇದ್ದಾರೆ.

(ಪಿ.ಬಿ.)

ಇತಿಹಾಸ

ಕ್ರಿ. ಪೂ. 4ನೆಯ ಶತಮಾನದಲ್ಲಿ ದಕ್ಷಿಣ ಚೀನದಿಂದ, ತಮ್ಮ ನೆರೆಯವರಾಗಿದ್ದ ಟ್ಸೆನ್ ಜನರ ಒತ್ತಡದಿಂದಾಗಿ, ವಿಯೆಟ್‍ಗಳು ಇಲ್ಲಿಗೆ ವಲಸೆ ಬಂದರು. ಉತ್ತರ ಇಂಡೊ-ಚೀನದ ಈಗಿನ ಟಾನ್‍ಕಿನ್ ಮತ್ತು ಅನ್ನಾಮ್ ಪ್ರದೇಶಗಳಲ್ಲಿ ನೆಲಸಿದ ಇವರು ಅಲ್ಲಿದ್ದ ಪ್ರೋಟೊ-ಮಲಯ್ ಮೂಲದ ಕಾಡು ಜನರ ವಿರೋಧವನ್ನೆದುರಿಸಿ ಅವರನ್ನು ಅಡಗಿಸಿ, ಅವರೊಂದಿಗೆ ವಿವಾಹಸಂಬಂಧ ಬೆಳೆಸಿದರು. ಹೀಗೆ ಸಂಭವಿಸಿದವರೇ ವಿಯೆಟ್ನಾಮೀಯರು. 

ಕ್ರಿ.ಪೂ.111ರಲ್ಲಿ ಚೀನೀಯರು ನಾಮ್ ವಿಯೆಟ್ ರಾಜ್ಯದ ಮೇಲೆ ಆಕ್ರಮಣ ನಡೆಸಿದರು. ಚೀನೀಯರ ಹಿಡಿತ ಬಿಗಿಯಾಗಿತ್ತಾದರೂ ವಿಯೆಟ್ನಾಮಿಗಳು ಆಗಾಗ್ಗೆ ದಂಗೆಯೆದ್ದು ಸ್ವತಂತ್ರರಾಗುತ್ತಿದ್ದರು. ಚೀನೀಯರ ದೀರ್ಘ ಆಳ್ವಿಕೆಯಿಂದಾಗಿ ವಿಯೆಟ್ನಾಮಿಗಳ ಮೇಲೆ  ಚೀನೀ ಸಂಸ್ಕøತಿಯ  ಪ್ರಭಾವ ಬೆಳೆಯಿತು. 938ರಲ್ಲಿ ನ್ಗೊ ಕ್ವಿಯೆನ್ ಎಂಬುವನು ಚೀನೀಯರನ್ನು ಸೋಲಿಸಿ ಸ್ವತಂತ್ರ ಪ್ರಭುತ್ವವೊಂದನ್ನು ಸ್ಥಾಪಿಸಿದ. 19ನೆಯ ಶತಮಾನದ ಉತ್ತರಾರ್ಧದವರೆಗೂ ಇದು ಸ್ವತಂತ್ರವಾಗಿ ಮುಂದುವರಿಯಿತು. ಈ ದೀರ್ಘಕಾಲದಲ್ಲಿ ಇಲ್ಲಿ ಅನೇಕ ರಾಜಮನೆತನಗಳು ಅನುಕ್ರಮವಾಗಿ ರಾಜ್ಯವಾಳಿದವು. ವಿಯೆಟ್ನಾಮಿನ ಮೇಲೆ ಒಡೆತನ ಸ್ಥಾಪಿಸಲು ಚೀನವೂ ಆಗಿಂದಾಗ್ಗೆ ದಾಳಿ ನಡೆಸುತ್ತಲೇ ಇತ್ತು. 15ನೆಯ ಶತಮಾನದಲ್ಲಿ ಸ್ವಲ್ಪ ಕಾಲ ಅದು ವಿಯೆಟ್ನಾಮಿನ ಮೇಲೆ ಪ್ರಭುತ್ವ ನಡೆಸಿತ್ತು.   

ವಿಯೆಟ್ನಾಮ್ ಸ್ವತಂತ್ರವಾದ ಮೇಲೆ ಕ್ರಮೇಣ ಅದು ದಕ್ಷಿಣದ ಕಡೆಗೆ ವಿಸ್ತಿರಿಸಿತು. ಇಡೀ ವಿಯೆಟ್ನಾಮಿನ ಮೇಲೆ  ತಾತ್ತ್ವಿಕವಾಗಿ ಒಬ್ಬನೇ  ಪ್ರಭುವಿನ ಒಡೆತನ ಇತ್ತಾದರೂ 1532-1592 ರಲ್ಲೂ 1674-1802 ರಲ್ಲೂ ಅದು ಉತ್ತರ-ದಕ್ಷಿಣ ವಿಯೆಟ್ನಾಮ್‍ಗಳಾಗಿ ಒಡೆದಿತ್ತು. 1802 ರಲ್ಲಿ ನ್ಗುಯೆನ್ ವಂಶವನ್ನು ಸ್ಥಾಪಿಸಿದ ನ್ಗುಯೆನ್ ಆನ್ ಎಂಬುವನು ಗಿಯಾ ಲಾಂಗ್ ಎಂಬ ಹೆಸರು ತಳೆದು ರಾಜ್ಯವಾಳಿ, ಇಡೀ ವಿಯೆಟ್ನಾಮಿನ ಏಕೀಕರಣವನ್ನು ಸಾಧಿಸಿದ.    

ವಿಯೆಟ್ನಾಮಿನ ವಿಭಜನೆ, ರಾಜರುಗಳ ನಡುವೆ ಅಧಿಕಾರಕ್ಕಾಗಿ ಬಡಿದಾಟ- ಇವುಗಳಿಂದಾಗಿ ಫ್ರೆಂಚರು ಇಲ್ಲಿಯ ರಾಜಕೀಯದಲ್ಲಿ ಕೈಹಾಕುವುದು ಸುಲಭವಾಯಿತು. ಕೊಚಿನ್ ಚೀನಕ್ಕೆ 1786ರಲ್ಲಿ ಕ್ಯಾತೊಲಿಕ್ ಬಿಷಪ್ ಒಬ್ಬ ಸೈನಿಕರ ಗುಂಪೊಂದರೊಂದಿಗೆ ಬಂದು, ಟೇ ಸನ್ ದಂಗೆಕೋರರ ವಿರುದ್ಧವಾಗಿ ನ್ಗುಯೆನ್ ಆನ್‍ಗೆ  ನೆರವು ನೀಡಿದ. ನ್ಗುಯೆನ್ ಆನನ ಅನಂತರ ಬಂದ ದೊರೆ ಸ್ಥಳೀಯ ಕ್ಯಾತೊಲಿಕರನ್ನು ಹಿಂಸಿಸಿದನೆಂಬ ನೆವದಿಂದ 1858ರಲ್ಲಿ ಫ್ರೆಂಚರೂ ಸ್ಟ್ಯಾನಿಷರೂ ಇಲ್ಲಿ ಆಕ್ರಮಣ ನಡೆಸಿದರು. ಫ್ರೆಂಚ್ ಸೇನೆಯ ವಿರುದ್ಧವಾಗಿ ವಿಯೆಟ್ನಾಮ್ ಹೋರಾಟ ನಡೆಸಲಾಗದೆ, ಅದು ಕೊಚಿನ್ ಚೀನದ ಮೂರು ಪ್ರಾಂತ್ಯಗಳನ್ನು ಫ್ರೆಂಚರಿಗೆ ಒಪ್ಪಿಸಬೇಕಾಯಿತು(1862-67). 1884ರಲ್ಲಿ ಅನ್ನಾಮ್ ಮತ್ತು ಟಾನ್‍ಕಿನ್‍ಗಳ ಮೇಲೆ ಫ್ರಾನ್ಸ್ ತನ್ನ ಅಧಿಕಾರ ಸ್ಥಾಪಿಸಿತು. ಕ್ರಮೇಣ ಅದರ ಪ್ರಭಾವ ವಿಸ್ತರಿಸಿ 19ನೆಯ ಶತಮಾನದ ಕೊನೆಯ ವೇಳೆಗೆ ಇಡೀ ಇಂಡೋಚೀನದ ಹತೋಟಿ ಪಡೆಯಿತು. ಆದರೂ ದೇಶೀಯರು ಆಗಿಂದಾಗ್ಗೆ ಪ್ರತಿಭಟಿಸುತ್ತಿದ್ದರು. ಮೂವರು ವಿಯೆಟ್ನಾಮೀ ಚಕ್ರವರ್ತಿಗಳನ್ನು ಫ್ರಾನ್ಸ್ ಪದಚ್ಯುತಿಗೊಳಿಸಿ ಗಡಿಪಾರು ಮಾಡಿತು. ಅನ್ನಾಮ್ ಮತ್ತು ವಿಯೆಟ್ನಾಂ ಪ್ರಭುಗಳಿಗೆ ಏನೂ ಅಧಿಕಾರ ಇಲ್ಲದಂತಾಯಿತು.   

ಒಂದನೆಯ ಮಹಾಯುದ್ಧದ ವೇಳೆಗೆ ಫ್ರೆಂಚರ ವಿರುದ್ಧ ಹೋರಾಟ ಪ್ರಬಲವಾಯಿತು. ಎರಡನೆಯ ಮಹಾಯುದ್ಧಾನಂತರ ಇದು ಮಹಾಬಂಡಾಯವಾಗಿ ಪರಿಣಮಿಸಿತು.  

ಎರಡನೆಯ ಮಹಾಯುದ್ಧದ ಸಮಯದಲ್ಲಿ(1940) ಜಪಾನೀಯರು ಇಂಡೋ-ಚೀನವನ್ನೆಲ್ಲ ಆಕ್ರಮಿಸಿಕೊಂಡು, ಹೆಸರಿಗೆ ಮಾತ್ರ ಅದರ ಆಡಳಿತವನ್ನು ಫ್ರೆಂಚ್ ವಿಚಿ ಸರ್ಕಾರದ ಕೈಯಲ್ಲಿ ಉಳಿಸಿದ್ದರು. 1945 ರಲ್ಲಿ ಜಪಾನೀಯರ ಪರಾಜಯ ಸಮೀಪಿಸಿದಾಗ ಅವರು ಫ್ರೆಂಚರನ್ನು ನಿಶಸ್ತ್ರರನ್ನಾಗಿ ಮಾಡಿ ಆಡಳಿತದಿಂದ ತೆಗೆದರು. ಅವರು ತಮ್ಮ ಮೇಲೆ ತಿರುಗಿಬೀಳಬಹುದೆಂಬ ಭೀತಿ ಇದಕ್ಕೆ ಕಾರಣ. ಇದರಿಂದ ಇಡೀ ದೇಶದಲ್ಲಿ ಆಡಳಿತ ವ್ಯವಸ್ಥೆ ಕುಸಿದುಬಿತ್ತು. ಜಪಾನೀಯರು ಬಾವೊದಾಯನನ್ನು ಅನ್ನಾಮಿನಲ್ಲಿ ತಮ್ಮ ಕೈಗೊಂಬೆ ಚಕ್ರವರ್ತಿಯಾಗಿ ಸ್ಥಾಪಿಸಿದರು. ಬಾವೊದಾಯ್ 1945ರ ಏಪ್ರಿಲ್‍ನಲ್ಲಿ ರಾಷ್ಟ್ರೀಯ ಸರ್ಕಾರವನ್ನು ಸ್ಥಾಪಿಸಿದ. ಯುದ್ಧ ಮುಗಿದ ಮೇಲೆ ಪರಿಸ್ಥಿತಿ ತೀವ್ರವಾಯಿತು. ಅರವತ್ತು ವರ್ಷಗಳ ಫ್ರೆಂಚ್ ಆಡಳಿತ ಮತ್ತು ನಾಲ್ಕು ವರ್ಷಗಳ ಜಪಾನೀ ಆಕ್ರಮಣಗಳ ಫಲವಾಗಿ ಶೂನ್ಯತೆ ಏರ್ಪಟ್ಟಿತ್ತು. ಆ ವರ್ಷದ ಸೆಪ್ಟೆಂಬರ್ 2ರಂದು ವಿಯೆಟ್ನಾಮ್ ವಿಮೋಚನಾ ಲೀಗ್ ಸ್ಥಾಪನೆಯಾಗಿ, ಅದು ಉತ್ತರ ವಿಯೆಟ್ನಾಮಿನ ಹ್ಯಾನಾಯ್‍ನಲ್ಲಿ ವಿಯೆಟ್ನಾಮ್ ಜನತಾ ಗಣರಾಜ್ಯ ಘೋಷಿಸಿತು.

1945 ರ  ಸೆಪ್ಟೆಂಬರನಲ್ಲಿ ಫ್ರೆಂಚ್ ಪಡೆಗಳು ಅಲ್ಲಿಗೆ ಮತ್ತೆ ಆಗಮಿಸಿದುವು.  ಸಂಧಾನಗಳು ಫಲಿಸಲಿಲ್ಲ. ಹೋ ಚೀ ಮಿನ್‍ನ ನಾಯಕತ್ವದಲ್ಲಿ ವಿಯೆಟ್-ಮಿನ್ಹ್ ಪಡೆಗಳು ಫ್ರೆಂಚ್ ನೆಲೆಗಳ ಮೇಲೆ ದಾಳಿ ಮಾಡಿದವು. ಟಾನ್‍ಕಿನ್, ಅನ್ನಾಮ್ ಮತ್ತು ಕೊಚಿನ್ ಚೀನಗಳನ್ನು ಸೇರಿಸಿ ಒಂದು ರಾಜ್ಯವನ್ನು ನಿರ್ಮಿಸಲು ಫ್ರೆಂಚರು ಬಾಮೊ ದಾಯ್‍ಗೆ ಸೂಚಿಸಿದರು. ವಿಯೆಟ್ನಾಮು ಫ್ರೆಂಚ್ ಒಕ್ಕೂಟದಲ್ಲಿ ಒಂದು ಸ್ವತಂತ್ರ ರಾಜ್ಯವೆಂದು 1949ರ ಮಾರ್ಚ್‍ನಲ್ಲಿ ಘೋಷಿಸಲಾಯಿತು.   

ಈ ನಡುವೆ ಮಿಯೆಟ್-ಮಿನ್ ಹೋರಾಟ ಮುಂದುವರಿಯಿತು. ಫ್ರೆಂಚರು ಇದನ್ನು ಎದುರಿಸಲಾಗಲಿಲ್ಲ. 1954 ರಲ್ಲಿ ಮಿಯೆಟ್-ಮಿನ್ ಪಡೆಗಳು ಡಿಯೆನ್ ಬಿಯೆನ್ ಫೂವನ್ನು ಹಿಡಿದುಕೊಂಡವು. 1954ರ ಜುಲೈಯಲ್ಲಿ ಫ್ರಾನ್ಸ್ ಮತ್ತು ವಿಯೆಟ್- ಮಿನ್ ನಡುವೆ ಕದನ ನಿಲುಗಡೆ ಒಪ್ಪಂದವಾಯಿತು. ತಾತ್ಕಾಲಿಕವಾಗಿ, ಸಾರ್ವತ್ರಿಕ ಚುನಾವಣೆಯವರೆಗೆ ವಿಯೆಟ್ನಾಮನ್ನು 17ನೆಯ ಅಕ್ಷಾಂಶದ ನೇರಕ್ಕೆ ವಿಭಜಿಬೇಕೆಂದು ಒಪ್ಪಲಾಯಿತು. 1956ರಲ್ಲಿ ನಡೆಯಬೇಕಾಗಿದ್ದ ಚುನಾವಣೆ ನಡೆಯಲಿಲ್ಲ. ಹೆಚ್ಚು ಜನಸಂಖ್ಯೆ ಇರುವ ಉತ್ತರ ವಿಯೆಟ್ನಾಮು ವಿಯೆಟ್-ಮಿನ್ ಪ್ರಭಾವಕ್ಕೆ ಒಳಪಟ್ಟಿರುವುದೆಂಬ ಕಾರಣದಿಂದ ದಕ್ಷಿಣ ವಿಯೆಟ್ನಾಮ್ ನಿಯೋಗ ಈ ಒಪ್ಪಂದಕ್ಕೆ ಸಹಿ ಹಾಕಲು ನಿರಾಕರಿಸಿತು. ಚುನಾವಣೆ ನಡೆಯಲೇ ಇಲ್ಲ.      

1955 ರಲ್ಲಿ ದಕ್ಷಿಣ ವಿಯೆಟ್ನಾಮಿನಲ್ಲಿ ನಡೆದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ನ್ಗೊಡಿನ್ ಡಿಯೆಮ್ ಅಧ್ಯಕ್ಷನಾಗಿ  ಚುನಾಯಿತನಾದ. ದಕ್ಷಿಣ ವಿಯೆಟ್ನಾಮನ್ನು ಗಣರಾಜ್ಯವೆಂದು ಘೋಷಿಸಲಾಯಿತು.  

1959 ರಲ್ಲಿ ದಕ್ಷಿಣ ವಿಯೆಟ್ನಾಮಿನಲ್ಲಿ ಸೈಗಾನ್ ಸರ್ಕಾರದ ವಿರುದ್ಧ ಚಳವಳಿ ತೀವ್ರವಾಯಿತು. 1960ರಲ್ಲಿ ರಾಷ್ಟ್ರೀಯ ವಿಮೋಚನಾ ರಂಗ ಸ್ಥಾಪಿತವಾಯಿತು. ಇದಕ್ಕೆ ಉತ್ತರ ವಿಯೆಟ್ನಾಮಿನ ನೆರವೂ ಇತ್ತು. ರಾಷ್ಟ್ರೀಯ ವಿಮೋಚನಾಸೇನೆಯ(ವಿಯೆಟ್‍ಕಾಂಗ್) ಗೆರಿಲಾ ಕಾರ್ಯಾಚರಣೆ ತೀವ್ರವಾಯಿತು. ಸರ್ಕಾರದಲ್ಲಿ ಒಂದಾದಮೇಲೊಂದರಂತೆ ಬಿಕ್ಕಟ್ಟುಗಳು ಉಂಟಾಗುತ್ತಲೇ ಇದ್ದವು. 1963 ರಲ್ಲಿ ಡಿಯೆಮನ ಸರ್ಕಾರವನ್ನು ಉರುಳಿಸಿ ಸೈನಿಕ ಸರ್ಕಾರ ಅಧಿಕಾರಕ್ಕೆ ಬಂತು.    

1961ರಲ್ಲಿ ದಕ್ಷಿಣ ವಿಯೆಟ್ನಾಮ್ ಸರ್ಕಾರಕ್ಕೂ ಅಮೆರಿಕಕ್ಕೂ ನಡುವೆ ಆದ ಒಪ್ಪಂದದ ಪ್ರಕಾರ ದಕ್ಷಿಣ ವಿಯೆಟ್ನಾಮಿಗೆ ಅಮೆರಿಕ ಆರ್ಥಿಕ ಹಾಗೂ ಸೈನಿಕ ನೆರವು ನೀಡಲಾರಂಭಿಸಿತು. 1964ರ ಆಗಸ್ಟ್ 4ರಂದು ಟಾನ್‍ಕಿನ್ ಕೊಲ್ಲಿಯಲ್ಲಿ ಅಮೆರಿಕನ್ ಡಿಸ್ಟ್ರಾಯರ್ ನೌಕೆಗಳ ಮೇಲೆ ದಾಳಿ ನಡೆಯಿತೆಂಬ ವರದಿಯ ಮೇಲೆ ಅಮೆರಿಕನ್ ವಿಮಾನಗಳು ಉತ್ತರ ವಿಯಟ್ನಾಮಿನ ಮೇಲೆ ದಾಳಿ ನಡೆಸತೊಡಗಿದುವು. ದಕ್ಷಿಣ ವಿಯೆಟ್ನಾಮಿನಲ್ಲಿ ಶಾಂತಿ ಭದ್ರತೆ ಸ್ಥಾಪಿಸುವುದು ತನ್ನ ಉದ್ದೇಶವೆಂದು ಅಮೆರಿಕದ ಕಾಂಗ್ರೆಸ್ ನಿರ್ಣಯ ಮಾಡಿತು. 1965ರ ಫೆಬ್ರುವರಿಯಿಂದ ಯುದ್ಧ ಬಿರುಸಾಯಿತು. ವಿಯೆಟ್ನಾಮ್ ಕಾರ್ಯಾಚರಣೆಯಲ್ಲಿ ಅಮೆರಿಕನ್ ಪಡೆಗಳು ನೇರವಾಗಿ ತೊಡಗಿದುವು. ಅಲ್ಲಿ ವಿಯೆಟ್ನಾಮ್ ಜಯ ಗಳಿಸುವ ಸೂಚನೆಗಳೇನೂ ಕಾಣಲಿಲ್ಲ.  ಅಮೆರಿಕ ಅಗಾಧ ನಷ್ಟ ಅನುಭವಿಸಿತು. ಅದರ ಅಭಿಮಾನಕ್ಕೂ ಚ್ಯುತಿ ಬಂತು. ದೇಶವಿದೇಶಗಳಲ್ಲಿ ಅಮೆರಿಕನ್ ಸರ್ಕಾರ ತೀವ್ರ ಟೀಕೆಗೆ ಗುರಿಯಾಯಿತು. ಕೊನೆಗೆ ಅಮೆರಿಕನ್ ಸರ್ಕಾರ ತನ್ನ ಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ತೀರ್ಮಾನಿಸಿತು. ಆದರೆ ವಿಮೋಚನಾ ಪಡೆಯ ಕೈಮೇಲಾಗಿ ಕೊನೆಗೆ ಇಡೀ ದಕ್ಷಿಣ ವಿಯಟ್ನಾಮ್ ಅದರ ವಶಕ್ಕೆ ಒಳಪಟ್ಟಿತು. ಸೈಗಾನ್ ಸರ್ಕಾರ ಕುಸಿದು ಬಿತ್ತು(1974). 1975 ರ ಏಪ್ರಿಲ್ 30ರಂದು ಉತ್ತರ ದಕ್ಷಿಣ ವಿಯೆಟ್ನಾಮ್‍ಗಳು ವಾಸ್ತವವಾಗಿ ಒಂದಾದುವು. ಅಖಂಡ ವಿಯೆಟ್ನಾಮನ್ನು ಪ್ರತಿನಿಧಿಸುವ ರಾಷ್ಟ್ರೀಯ ಸಭೆ 1976ರ ಏಪ್ರಿಲ್ 25ರಂದು ಆಯ್ಕೆ ಹೊಂದಿತು. ಆ ಸಭೆ ಜೂನ್ 24ರಂದು ಹ್ಯಾನಾಯಿಯಲ್ಲಿ ಸೇರಿ ಜುಲೈ 2ರಂದು ದೇಶದ ಪುನರೇಕೀಕರಣವನ್ನು ಘೋಷಿಸಿತು. ಅದಕ್ಕೆ ವಿಯೆಟ್ನಾಮ್ ಸಮಾಜವಾದಿ ಗಣರಾಜ್ಯವೆಂದು ಹೆಸರಾಯಿತು. ಉತ್ತರ ವಿಯೆಟ್ನಾಮಿನ ಪ್ರಧಾನ ಮಂತ್ರಿ ಫಾಮ್ ವಾನ್ ಡಾಂಗ್ ಅವರು ಮರುದಿವಸ ದಕ್ಷಿಣ ವಿಯೆಟ್ನಾಮಿನ ಪ್ರತಿನಿಧಿಗಳನ್ನು ಒಳಗೊಂಡ ಸರ್ಕಾರ ರಚಿಸಿದರು.       

ಆರ್ಥಿಕತೆ

ಕೃಷಿ :  ದಕ್ಷಿಣ  ವಿಯೆಟ್ನಾಮ್   ಕೃಷಿಪ್ರಧಾನ  ಪ್ರದೇಶ.  ಜನಸಂಖ್ಯೆಯ ಐದನೆಯ  ನಾಲ್ಕರಷ್ಟು  ಮಂದಿ  ನೆಲದಿಂದಲೇ ಬದುಕು  ನಡೆಸುತ್ತಾರೆ.  ಸುಮಾರು  30ಲಕ್ಷ   ಹೆಕ್ಟೇರ್  ನೆಲ  ಸಾಗುವಳಿಗೆ ಒದಗಿ  ಬಂದಿದೆ.   ವರ್ಷದಲ್ಲಿ  ಆರು ತಿಂಗಳು  ಇಲ್ಲಿ  ತುಂಬ ಮಳೆಯಾಗುತ್ತದೆ. ಉಳಿದ ಕಾಲ ಶುಷ್ಕ. ಆದ್ದರಿಂದ ವರ್ಷಕ್ಕೆ  ಒಂದು ಬೆಳೆ ತೆಗೆಯುವುದು ಸಾಮಾನ್ಯ.  ಈಗ  ನೀರಾವರಿ  ಕಾರ್ಯಕ್ರಮಗಳು ಜಾರಿಗೆ  ಬರುತ್ತಿವೆ. ಕಮ್ಯೂನಿಸ್ಟ್  ಆಡಳಿತದಲ್ಲಿನ ಭೂ  ಸುಧಾರಣೆಗಳಾಗುತ್ತಿವೆ.  ಕೃಷಿ  ಕಾರ್ಯದಲ್ಲಿ  ಸೇ.60ರಷ್ಟು  ಬತ್ತದ  ಬೆಳೆಗೆ  ಮೀಸಲಾಗಿದೆ.  ಮೇಕಾಂಗ್  ಮತ್ತು   ಅನ್ನಾಮ್ ಬಯಲುಗಳ  ಪ್ರಧಾನ  ಬೆಳೆ  ಬತ್ತ.  ಇನ್ನೊಂದು  ಉತ್ಪನ್ನ ರಬ್ಬರ್. ಇತರ ಬೆಳೆಗಳು ಬೂರುಗಹತ್ತಿ, ಕೊಬ್ಬರಿ, ಸಿಹಿಗೆಣಸು, ಕಾಳುವೆಣಸು, ಹತ್ತಿಬೀಜ, ಕ್ವಿನೈನ್, ದಾಲ್ಚಿನ್ನಿ, ಪುಂಡಿನಾರು, ರ್ಯಾಮಿ  ನಾರು ಮತ್ತು ಹತ್ತಿ, ದನ, ಹಂದಿ,  ಕೋಳಿಗಳನ್ನು ಸಾಕುತ್ತಾರೆ.  ಭಾರ ಎಳೆಯಲೂ ಉಳಲೂ  ಕೋಣಗಳನ್ನೂ ಉಪಯೋಗಿಸುತ್ತಾರೆ.  
ಮೀನುಗಾರಿಕೆ : ದೇಶದಲ್ಲಿ  ಸುಮಾರು  ಮೂರು ಲಕ್ಷ ಮೀನುಗಾರರಿದ್ದಾರೆ.   ರೈತರು ಮೀನು  ಹಿಡಿಯುವುದರಲ್ಲೂ  ನಿರತರಾಗಿದ್ದಾರೆ.  ಮೀನು ವಿಯೆಟ್ನಾಮೀಯರ ಒಂದು ಮುಖ್ಯ  ಆಹಾರ.  ಸುಮಾರು  80.000  ದೋಣಿಗಳನ್ನು ಮೀನು ಹಿಡಿಯಲು  ಬಳಸಲಾಗುತ್ತಿದೆ.  ಇವುಗಳಲ್ಲಿ  ಸುಮಾರು 24,000 ದೊಣಿಗಳು  ಮೋಟಾರ್ ಚಾಲಿತ, ಸುಮಾರು  ನಲವತ್ತು ಪ್ರಭೇದಗಳ ಮೀನುಗಳನ್ನು ಹಿಡಿಯುತ್ತಾರೆ.       

ಅರಣ್ಯಗಾರಿಕೆ : ದಕ್ಷಿಣ   ವಿಯೆಟ್ನಾಮಿನ ಸುಮಾರು ಅರ್ಧದಷ್ಟು ನೆಲ ಅರಣ್ಯಾವೃತ. ಆದರೆ ಮೊದಲಿದ್ದ ಕಾಡುಗಳನ್ನು ಬಹುತೇಕ  ಕಡಿಯಲಾಗಿದೆ. ಈಗಿನವು ಅನಂತರ ಬೆಳೆದಂಥವು.  ಇವು ವಾಣಿಜ್ಯ ದೃಷ್ಟಿಯಿಂದ ಅಷ್ಟೇನೂ ಉಪಯುಕ್ತವಲ್ಲ.  ರಾಳ, ಪೈನ್ ಎಣ್ಣೆ, ಟರ್ಪೆಂಟೈನ್, ಅರಗು- ಇವು  ಕೆಲವು ಉತ್ಪನ್ನಗಳು.           

ಗಣಿಗಾರಿಕೆ : ನಾಂಗ್‍ಸಾನ್ ಬಳಿ ಕಲ್ಲಿದ್ದಲು, ಬಾಂಗ್ ಮ್ಯೂನಲ್ಲಿ ಚಿನ್ನ ಸಿಗುತ್ತವೆ. ಇತರೆ ಖನಿಜಗಳು ಲವಣ, ಸಸ್ಯಾಂಗಾರ, ಗಾಜು ಮರಳು, ಮಾಲಿಬ್ಡಿನಮ್, ಸೀಸ, ಬಿಸ್ಮತ್ ಮತ್ತು ತಾಮ್ರ. ಪ್ಯಾರಸೆಲ್ ದ್ವೀಪಗಳಲ್ಲಿ ಫಾಸ್ಫೇಟ್  ನಿಕ್ಷೇಪಗಳಿವೆ.  
ವಿದ್ಯುತ್ತು : ವಿದ್ಯುತ್ತಿನ ಉತ್ಪಾದನೆ ವಿಶೇಷವಾಗಿ ಹಬೆ ಮತ್ತು ಡೀಸೆಲ್ ಕೇಂದ್ರಗಳಲ್ಲಿ ಉತ್ಪಾದನೆಯಾಗುತ್ತದೆ. ಜಲವಿದ್ಯುತ್ತಿನ ಉತ್ಪಾದನೆ ಬಲು ಕಡಿಮೆ. ಇದನ್ನು ಉತ್ಪಾದಿಸಲು ಅವಕಾಶಗಳು ಯುಥೇಚ್ಛವಾಗಿ ಉಂಟು.  ವಿಯೆಟ್ನಾಮಿನ  ಮುಕ್ಕಾಲು ಪಾಲು ಗ್ರಾಮಗಳಿಗೆ ವಿದ್ಯುತ್ ಸೌಲಭ್ಯವಿಲ್ಲ. ಮೇಕಾಂಗ ಮುಖಜ ಭೂಮಿಯ ಬಳಿ ತೈಲ ಸಿಗುವ ಸಾಧ್ಯತೆ ಇದೆ.   

ಕೈಗಾರಿಕೆ : ಸಣ್ಣ  ಕೈಗಾರಿಕೆಗಳು  ಇಲ್ಲಿ ತಕ್ಕಮಟ್ಟಿಗೆ ಬೆಳೆದಿವೆ. ಕೃಷಿ ಹಾಗೂ ಅರಣ್ಯೋತ್ಪನ್ನಗಳ ಸಂಸ್ಕರಣವೇ  ಪ್ರಧಾನ. ಚರ್ಮ ಹದಗಾರಿಕೆ, ಪಾದರಕ್ಷೆ, ಸಾಬೂನು, ಕಾಗದ, ಇಟ್ಟಿಗೆ,  ಹೆಂಚು,  ಬೆಂಕಿಕಡ್ಡಿ, ಸಕ್ಕರೆ, ರಾಸಾಯನಿಕ, ಹೊಗೆಸೊಪ್ಪು ಮತ್ತು  ಜವಳಿ ಕೈಗಾರಿಕೆಗಳು ಇವೆ. 

ಸಾರಿಗೆ : ದಕ್ಷಿಣ ವಿಯೆಟ್ನಾಮಿನಲ್ಲಿ 5,600 ಕಿಮೀ.  ಒಳನಾಡಿನ ಜಲ ಮಾರ್ಗಗಳಿವೆ.  ಜಲಯಾನದ ದೃಷ್ಟಿಯಿಂದಲೂ ಮೇಕಾಂಗ್ ನದಿ ಪ್ರಾಮುಖ್ಯಗಳಿಸಿದೆ.  ದಕ್ಷಿಣ ವಿಯೆಟ್ಮಾಮಿನ ರೈಲುಮಾರ್ಗಗಳು ಅಲ್ಲಿಯ ದೀರ್ಘಯುದ್ಧದಿಂದಾಗಿ  ನಷ್ಟಕ್ಕೊಳಗಾಗಿವೆ. ದಕ್ಷಿಣ ವಿಯೆಟ್ನಾಮಿನ ಮುಖ್ಯ ಬಂದರುಗಳು  ಸೈಗಾನ್, ನ್ಹಾ ಟ್ರಾಂಗ್ ಕ್ವಿನ್ಹಾನ್ ಮತ್ತು ದ ನಾಂಗ್. ಮುಖ್ಯ ನಗರಗಳಲ್ಲಿ ವಿಮಾನ ನಿಲ್ದಾಣಗಳಿವೆ. 
(ಪಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ